1870-1924. ರಷ್ಯ ಕ್ರಾಂತಿಯ ನೇತಾರ, ರಾಜಕೀಯ ಮುತ್ಸದಿ, ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ, ಕಾರ್ಲ್‍ಮಾಕ್ರ್ಸ್‍ನ ಸಮಾಜವಾದಿ ತತ್ತ್ವದ ಅನುಯಾಯಿ. ಇವನು 1870 ಏಪ್ರಿಲ್ 22ರಂದು ರಷ್ಯದ ವೋಲ್ಗಾನದಿ ತೀರದಲ್ಲಿನ ಸಿಮ್‍ಬ್ರಿಸ್ಕ್ ಪ್ರಾಂತ್ಯದ (ಉಲಿಯನೋವಸ್ಕಿ) ಒಂದು ಹಳ್ಳಿಯಲ್ಲಿ ಜನಿಸಿದ. ಈತನ ಮೊದಲ ಹೆಸರು ವ್ಲಾದಿಮಿರ್ ಇಲ್ಯಿಚ್ ಉಲ್ಯನೋವ್. ತಂದೆ ಇಲ್ಯನಿಕೋಲಯವಿಚ್ ಉಲ್ಯನೋವ್ ವೃತ್ತಿಯಲ್ಲಿ ಶಾಲಾತನಿಖಾಧಿಕಾರಿ, ತಾಯಿ ಮರಿಯ ಅಲೆಕ್ಸಾಂಡ್ರೋವ್‍ನ ಬ್ಲಾಂಕ್. ಈಕೆ ಶಿಕ್ಷಕಿ. ಓದು, ಕ್ರೀಡೆ, ಈಜು ಮುಂತಾದ ಚಟುವಟಿಕೆ ಗಳಲ್ಲಿ ಪ್ರತಿಭಾವಂತನಾದ ಲೆನಿನ್ ಬಾಲ್ಯದಲ್ಲೆ ಲರ್ಮನ್‍ಟಾಫ್, ಗೊಗೋಲ್, ತುರ್ಗೇನೆಫ್, ಟಾಲ್ಸ್‍ಟಾಯ್‍ರವರ ಕೃತಿಗಳು ಮತ್ತು ಬೆಲೀನ್‍ಸ್ಕಿ, ಕೆರೆನ್‍ಸ್ಕಿ ಮೊದಲಾದವರ ಬರೆಹಗಳಿಂದ ಪ್ರಭಾವಿತನಾದ. ಕಜನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವಾಗ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಡೆದ ಮುಷ್ಕರದಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯದಿಂದ ಹೊರದೂಡಲ್ಪಟ್ಟ (1887). ಅನಂತರ ಸೇಂಟ್ ಪೀಟರ್ಸ್‍ಬರ್ಗ್ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರ ಪದವಿ ಪಡೆದ (1891) ಇವನು ನಡೆಜ್ಡಕ್ರುಪ್ಸ್‍ಕಾಯ ಎಂಬಾಕೆಯೊಡನೆ 1898 ಜುಲೈ 22ರಂದು ವಿವಾಹ ವಾದ. ಕಾರ್ಲ್‍ಮಾಕ್ರ್ಸ್‍ನ ಕಮ್ಯುನಿಸ್ಟ್ ತತ್ತ್ವಗಳನ್ನು ಅಳವಡಿಸಿಕೊಂಡು ಕಾರ್ಮಿಕರ ಜೊತೆಗೂಡಿ ಕ್ರಾಂತಿಕಾರಿಯಾದ. ತನ್ನ ಇಷ್ಕಾ (ಕಿಡಿ) ಪತ್ರಿಕೆ ಮೂಲಕ ಕಾರ್ಮಿಕರನ್ನು ಜಾಗೃತಗೊಳಿಸಿ ಹೋರಾಟದ ಕಣಕ್ಕಿಳಿಸಿದ. ಅಪಾರ ಬೆಂಬಲಿಗರೊಂದಿಗೆ ರೈಲು ದರೋಡೆ, ಕಚೇರಿ ಖಜಾನೆ ಲೂಟಿ ಮೊದಲಾದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ. ಅನೇಕ ಮಾಕ್ರ್ಸ್‍ವಾದಿ ಸಂಘಗಳನ್ನು ಒಗ್ಗೂಡಿಸಿ ಸೇಂಟ್‍ಪೀಟರ್ಸ್‍ಬರ್ಗ್‍ನಲ್ಲಿ ಕಾರ್ಮಿಕ ವಿಮೋಚನ ಸಂಘರ್ಷ ಸಮಿತಿ ಎಂಬ ಸಂಘ ಸ್ಥಾಪಿಸಿ (1915) ಸಮಾಜವಾದಿ ಪ್ರಜಾಪ್ರಭುತ್ವ ಪಕ್ಷದ ನಾಯಕನಾದ. ಇವನು ಸರ್ಕಾರವನ್ನು ನಿಷ್ಕಿøಯಗೊಳಿಸಲು ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿ ಸೆರೆವಾಸವಲ್ಲದೆ ಗಡಿಪಾರು ಶಿಕ್ಷೆಯನ್ನೂ ಅನುಭವಿಸಿದ. ನಿರಾಶ್ರಿತನಾಗಿ ಸ್ವಿಟ್ಜರ್‍ಲೆಂಡಿನಲ್ಲಿದ್ದಾಗ ಜರ್ಮನಿಯ ಸಹಾಯದಿಂದ ಕ್ರಾಂತಿಕಾರಿ ಸಾಹಿತ್ಯವನ್ನು ರಷ್ಯಕ್ಕೆ ರವಾನಿಸುತ್ತಿದ್ದ. ಸೈಬೀರಿಯದಲ್ಲಿನ ಲೇನಾನದಿ ತೀರದ ಲೇನಾ ಎಂಬಲ್ಲಿ ‘ಲೆನಿನ್’ ಎಂಬ ಹೆಸರಿನಲ್ಲಿ ಪತ್ರಿಕೆ ಪ್ರಕಟಿಸುತ್ತಿದ್ದುದರಿಂದ ಮುಂದೆ ಅದೇ ಹೆಸರಿನಿಂದ ಪ್ರಸಿದ್ಧನಾದ (1901). 1917ರ ಕ್ರಾಂತಿಯ ವೇಳೆಗೆ ಕ್ರಾಂತಿಯ ನಾಯಕತ್ವವಹಿಸಿದ. ಇದೇ ಸಮಯದಲ್ಲಿ ಕೆರೆನ್‍ಸ್ಕಿ ನಾಯಕತ್ವದ ಬೊಲ್‍ಸ್ತೊವೋ (ಬಹುಸಂಖ್ಯಾತ ಪಕ್ಷ) ಗುಂಪು ಕ್ರಾಂತಿಯನ್ನಾ ರಂಭಿಸಿದಾಗ ಇವನು ‘ಸೋಷಿಯಲ್ ಡೆಮೊ ಕ್ರಾಟಿಕ್ ಪಾರ್ಟಿ’ (ಮೆನ್‍ಷಿ ನ್‍ಸ್ತೊವೋ ಅಲ್ಪಸಂಖ್ಯಾತ ಪಕ್ಷ) ಗುಂಪನ್ನು ಬಲಪಡಿಸಿ ಕಮ್ಯುನಿಸ್ಟ್‍ರ ಪರ ಪ್ರಚಾರ ಮಾಡಿ, ರೈತರು ಹಾಗೂ ಕಾರ್ಮಿಕರ ಬೆಂಬಲ ಪಡೆದು ಜಾರ್ ದೊರೆಗಳ ದಬ್ಬಾಳಿಕೆ ಸರ್ಕಾರವನ್ನು ಕೊನೆಗೊಳಿಸಿದ. ಕ್ರಾಂತಿಯ ಅನಂತರ ತಾತ್ಕಾಲಿಕ ಸರ್ಕಾರ ಸ್ಥಾಪಿಸಿ ರಷ್ಯದ ಪ್ರಥಮ ಅಧ್ಯಕ್ಷನಾದ(1917-24). ಇವನು ತನ್ನ ಆಡಳಿತಾವಧಿಯಲ್ಲಿ ಕಾರ್ಲ್‍ಮಾಕ್ರ್ಸ್‍ನ ತತ್ತ್ವವನ್ನು ರಷ್ಯದಲ್ಲಿ ಜಾರಿಗೆ ತಂದು ಎಲ್ಲ ಬ್ಯಾಂಕ್‍ಗಳು, ಕಾರ್ಖಾನೆಗಳು, ರೈಲ್ವೆ ಹಾಗೂ ಭೂಮಿಯ ಒಡೆತನವನ್ನು ರಾಷ್ಟ್ರೀಕರಣಗೊಳಿಸಿದ. ಪ್ರಜೆಗಳೆಲ್ಲರೂ ಸಾರ್ವತ್ರಿಕವಾಗಿ ಕೆಲಸ ನಿರ್ವಹಿಸುವುದರ ಮೂಲಕ ಉತ್ಪಾದನೆ ಹಾಗೂ ಹಂಚಿಕೆಯಲ್ಲಿ ಸಮಾನತೆಯನ್ನು ಜಾರಿಗೆ ತಂದ. ಶಿಕ್ಷಣ ರಾಷ್ಟ್ರೀಕರಣಗೊಳಿಸಿ ಬೋಧನಾ ಪದ್ಧತಿಯಲ್ಲಿ ಕಮ್ಯುನಿಸ್ಟ್ ಆದರ್ಶಗಳನ್ನು ಅಳವಡಿಸಿದ. ಕ್ರೈಸ್ತಧರ್ಮದ ವಿಶೇಷ ಸ್ಥಾನಮಾನ ರದ್ದುಪಡಿಸಿದ. ಒಂದನೆಯ ಮಹಾಯುದ್ಧದಿಂದ ರಷ್ಯ ಅಪಾರ ಆರ್ಥಿಕ ನಷ್ಟಕ್ಕೊಳಗಾಯಿತು. 1918ರಲ್ಲಿ ಜರ್ಮನ್ನರನ್ನು ರಷ್ಯದಿಂದ ಹೊರದೂಡುವಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಸಾಧಿಸಿದ. ಜರ್ಮನಿಯೊಂದಿಗೆ ಬ್ರೆಸ್ಟ್ ಲಿಟೊವ್‍ಸ್ಕ್ ಒಪ್ಪಂದದ ಮೂಲಕ ರಷ್ಯವನ್ನು ಒಂದನೆಯ ಮಹಾಯುದ್ಧದಿಂದ ಹೊರತಂದ. ಇವನ ಕ್ರಾಂತಿಕಾರಕ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಬಂಡವಾಳಗಾರರು, ಜಮಿನ್ದಾರರು ವಿರೋಧಿಸಿದರು. 1921ರಲ್ಲಿ ಭೀಕರಕ್ಷಾಮ ಉಂಟಾದಾಗ ಮುಷ್ಕರಗಳು ಕಾಣಿಸಿಕೊಂಡವು. ಒಂದನೆಯ ಮಹಾಯುದ್ಧದಲ್ಲಿ ರಷ್ಯ ಸೈನ್ಯವನ್ನು ಹಿಂತೆಗೆದುಕೊಂಡಿದ್ದು ಹಾಗೂ ಜಾರ್ ದೊರೆಗಳ ವಿದೇಶಿ ಸಾಲಕ್ಕೆ ಇವನು ಜವಾಬ್ದಾರನಾಗದೆ ಇದ್ದುದನ್ನು ನೆಪಮಾಡಿಕೊಂಡು ಇಂಗ್ಲೆಂಡ್ ಮತ್ತು ಫ್ರಾನ್ಸ್ ಮತ್ತಿತರ ಯುರೋಪಿನ ರಾಷ್ಟ್ರಗಳು ರಷ್ಯದ ಮೇಲೆ ದಾಳಿ ಮಾಡಿದವು. ಇವನು ತನ್ನ ಕೆಂಪುದಳ ಮತ್ತು ಚೆಕಾ ಎಂಬ ಗುಪ್ತ ಪೊಲೀಸ್ ಪಡೆಯ ಸಹಾಯದಿಂದ ಹಾಗೂ ಸ್ಟಾಲಿನ್ ಮುಖಂಡತ್ವದಲ್ಲಿ 1920ರ ವೇಳೆಗೆ ಎಲ್ಲ ಅಪಾಯಗಳನ್ನು ಬಗೆಹರಿಸಿದ. ದೇಶದಲ್ಲಿ ವೈದ್ಯಕೀಯ ಸೌಲಭ್ಯ ಹಾಗೂ ಮೂಲಭೂತ ಆವಶ್ಯಕತೆಗಳನ್ನು ಬಲಪಡಿಸಿ ಪ್ರಜೆಗಳ ಪ್ರೀತಿಗೆ ಪಾತ್ರನಾದ. ಸಮಾಜವಾದ, ಬಂಡವಾಳವಾದ ಹಾಗೂ ಖಾಸಗಿ ಉದ್ಯಮಗಳ ತಳಹದಿಯ ಮೇಲೆ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದ(1921). ಲೆನಿನ್ ಅಭಿಪ್ರಾಯ ಪಟ್ಟಂತೆ “ಎರಡು ಹೆಜ್ಜೆ ಮುಂದೆ ಹೋಗಲು ಒಂದು ಹೆಜ್ಜೆ ಹಿಂದೆ ಇಡುವುದು” ಎಂಬ ತತ್ತ್ವವನ್ನು ಇದು ಆಧರಿಸಿತ್ತು. ಹಾಗೂ ಈ ಹೊಸನೀತಿಯ ಮೂಲಕ ದುಡಿಯುವ ವರ್ಗ ರೈತರ ನಡುವೆ ಆರ್ಥಿಕ ಮತ್ತು ರಾಜಕೀಯ ಸಾಮರಸ್ಯ ತಂದ. ರೈತರಿಗೆ ಬಾಡಿಗೆ ಆಧಾರದಲ್ಲಿ ಜಮೀನು, ಶ್ರಮಕ್ಕೆ ತಕ್ಕ ಕೂಲಿ, ತಾವು ಬೆಳೆದ ಬೆಳೆಗಳನ್ನು ಲಾಭಕ್ಕೆ ಖಾಸಗಿ ವ್ಯಾಪಾರಿಗಳಿಗೆ ಮಾರುವ ಅವಕಾಶ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದ. ರೈತರು ಖಾಸಗಿ ವಲಯದಲ್ಲಿ ಸಣ್ಣ ಪ್ರಮಾಣದ ಉದ್ಯಮ ಹಾಗೂ ವ್ಯಾಪಾರಕ್ಕೆ ಉತ್ತೇಜನ ನೀಡಿದ. ನಾಣ್ಯ ಸುಧಾರಣೆ ಮಾಡಿ ಪಡಿತರ ಪದ್ಧತಿ ರದ್ದುಗೊಳಿಸಿದ. ಬೃಹತ್ ಕೈಗಾರಿಕೆ, ಸಾರಿಗೆ ಸಂಪರ್ಕ, ವಿದೇಶಿ ವ್ಯಾಪಾರ ಹಾಗೂ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸಿ ಖಾಸಗಿ ಬಂಡವಾಳದಿಂದ ಮುಕ್ತಗೊಳಿಸಿದ. ಕೃಷಿಬ್ಯಾಂಕ್ ಸ್ಥಾಪಿಸಿ ರೈತರಿಗೆ ಬೇಕಾದ ಯಂತ್ರೋಪಕರಣಗಳು ಹಾಗೂ ಸಾಲಸೌಲಭ್ಯ ನೀಡುವ ವ್ಯವಸ್ಥೆ ಮಾಡಿದ. ‘ಗ್ರಾಹಕರ ಸಹಕಾರ ಸಂಘ’ ಸ್ಥಾಪಿಸಿ ವ್ಯಾಪಾರ ಅಭಿವೃದ್ಧಿಪಡಿಸುವುದರ ಮೂಲಕ ಉತ್ಪಾದನೆಯನ್ನು ತೀವ್ರಗೊಳಿಸಿ ದೇಶ ಸದೃಢವಾಗುವಂತೆ ಮಾಡಿದ. 1923ರಲ್ಲಿ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷದ ಬೋಲ್ಷೆವಿಕ್ ಗುಂಪನ್ನು ‘ಕಮ್ಯುನಿಸ್ಟ್ ಪಾರ್ಟಿ ಆಫ್ ದಿ ಸೋವಿಯತ್ ಯೂನಿಯನ್ (ಸಿ.ಪಿ.ಎಸ್.ಯು.) ಎಂದು ಪುನರ್ ನಾಮಕರಣ ಮಾಡಿದ. ತನ್ನ ಕೊನೆಗಾಲದವರೆಗೆ ದುಡಿಯು ವರ್ಗ ಹಾಗೂ ಕಾರ್ಮಿಕರ ಹಿತಕ್ಕಾಗಿ ಶ್ರಮಿಸಿದ. ನೂತನ ರಾಷ್ಟ್ರನಿರ್ಮಾಣಕ್ಕಾಗಿ ಅಪಾರವಾಗಿ ದುಡಿದ ಈತ 1924 ಜನವರಿ 21ರಂದು ನಿಧನನಾದ. ಇವನ ಗೌರವಾರ್ಥ ಪೆಟ್ರೊಗ್ರಾಡ್ ನಗರವನ್ನು ಲೆನಿನ್‍ಗ್ರಾಡ್ ಎಂದು ಮರುನಾಮಕರಣ ಮಾಡಲಾಯಿತು.

(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ